ತುರುಬಿ ಗಿಡ -
ಮ್ಯಾಲ್ವೇಸೀ ಕುಟುಂಬಕ್ಕೆ (ದಾಸವಾಳ ಕುಟುಂಬ) ಸೇರಿದ ಒಂದು ಗಿಡ. ಇದರ ವೈಜ್ಞಾನಿಕ ಹೆಸರು ಅಬ್ಯೂಟಿಲಾನ್ ಇಂಡಿಕಮ್. ಇದನ್ನು ಶ್ರೀಮುದ್ರೆ ಗಿಡ, ಅತಿಬಲ, ಕುತ್ತಿಗಿಡ ಮುಂತಾಗಿ ಕರೆಯುವುದೂ ಉಂಟು. ಕಂಟ್ರಿ ಮ್ಯಾಲೊ ಎಂಬುದು ಇದರ ಇಂಗ್ಲಿಷ್ ಹೆಸರು. ಸಾಮಾನ್ಯವಾಗಿ ಉಷ್ಣವಲಯಗಳ ನಿವಾಸಿಯಾದ ಇದು, ಭಾರತದ ಎಲ್ಲ ಕಡೆಗಳಲ್ಲೂ ಕಾಣಬರುತ್ತದೆ. ಇದು 3-5 ಅಡಿಗಳೆತ್ತರಕ್ಕೆ ಬೆಳೆಯುವ ಮೂಲಿಕೆ. ಇದರ ಕಾಂಡದ ಮೇಲೆಲ್ಲ ಒರಟಾದ ತುಪ್ಪಳಿದೆ. ಎಲೆಗಳು ಸರಳರೀತಿಯವು; ಪರ್ಯಾಯ ಮಾದರಿಯಲ್ಲಿ ಜೋಡಣೆಗೊಂಡಿವೆ. ಇವುಗಳ ಅಕಾರ ಹೃದಯದಂತೆ. ಇವಕ್ಕೆ ಉದ್ದನೆಯ ತೊಟ್ಟೂ, ಗರಗಸದಂಥ ಅಂಚೂ ಉಂಟು. ಇವುಗಳ ಮೇಲಿನ ಹಾಗೂ ಕೆಳಗಿನ ಪಾತಳಿಯ (ಸರ್‍ಫೇಸ್) ಮೇಲೆ ಮೃದುವಾದ ತುಪ್ಪುಳು ಇದೆ. ಹೂಗಳು ಅಚ್ಚಹಳದಿಬಣ್ಣದವು. ಪ್ರತಿ ಹೂವಿನಲ್ಲಿ 5 ಪುಷ್ಟಪತ್ರಗಳು, 5 ದಳಗಳು, ಹಲವಾರು ಕೇಸರಗಳು, 5-20 ಕಾರ್ಪೆಲುಗಳಿಂದ ಕೂಡಿದ ಅಂಡಾಶಯ ಇವೆ.

ತುರುಬಿಗಿಡದ ಕಾಂಡದಿಂದ ಒಳ್ಳೆಯ ನಾರನ್ನು ಪಡೆಯಬಹುದು. ಹಗ್ಗಗಳನ್ನು ತಯಾರಿಸುವುದಕ್ಕೆ ಈ ನಾರು ಉಪಯುಕ್ತವಾಗಿದೆ. ಎಲೆಗಳಿಂದ ಪಡೆಯಲಾಗುವ ಒಂದು ರೀತಿಯ ಅಂಟುದ್ರವವನ್ನು ಸಾಮಾನ್ಯವಾಗಿ ಹುಣ್ಣು, ಗಾಯಗಳಿಗೆ ಔಷಧವನ್ನಾಗಿ ಬಳಸುವುದುಂಟು. ಅಲ್ಲದೆ ಎಲೆಗಳನ್ನು ಬೇಯಿಸಿ ತಿನ್ನುವುದರಿಂದ ರಕ್ತಸ್ರಾವಯುಕ್ತ ಮೊಳೆರೋಗವನ್ನು ಗುಣಪಡಿಸಬಹುದು. ಬ್ರಾಂಕೈಟಿಸ್, ಮೇಹರೋಗ, ಅತಿಸಾರ ಮತ್ತು ನೆಗಡಿಗಳಿಗೆ ತುರುಬಿಗಿಡದ ಕಷಾಯ ಸಿದ್ಧೌಷಧಿ.

ಜ್ವರದ ತಾಪ ಶಮನ ಮಾಡಲು, ರಕ್ತಮೂತ್ರ ಮತ್ತು ಕುಷ್ಠರೋಗ ನಿವಾರಣೆಯಲ್ಲಿ ಇದರ ಕಷಾಯವನ್ನು ಬಳಸುವುದಿದೆ. ಅಲ್ಲದೆ ಈ ಕಷಾಯ ತಂಪುಕಾರಕ ಇದರ ಬೇರುಗಳು ಗರ್ಭಕೋಶದ ರಕ್ತಸ್ರಾವವನ್ನು ಬಹಳವಾಗಿ ಕಡಿಮೆ ಮಾಡುತ್ತವೆ ಎಂದು ಹೇಳಲಾಗಿದೆ.

ತುರುಬಿಗಿಡದ ಬೀಜಗಳಿಗೆ ಒಳ್ಳೆಯ, ವಿರೇಚಕ ಗುಣ ಉಂಟು. ಇವನ್ನು ಪಶ್ಚಿಮ ಭಾರತದಲ್ಲಿ ಬಲಬೀಜ ಎಂಬ ಹೆಸರಿನಿಂದ ಕೆಮ್ಮು, ಹಲವು ಬಗೆಯ ಹೃದಯ ರೋಗಗಳು, ಮೇಹರೋಗ, ಮತ್ತು ಬ್ರಾಂಕೈಟಿಸ್‍ಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಬೀಜಗಳಿಗೆ ಕಾಮೋದ್ದೀಪಕ ಗುಣವೂ ಉಂಟು. ಮಕ್ಕಳಲ್ಲಿ ಲಾಡಿ ಹುಳುಗಳು ಕಂಡುಬಂದಲ್ಲಿ ಬೀಜಗಳ ಹೊಗೆಯನ್ನು ಕೊಡುವುದಿದೆ.						(ಕೆ.ಎಸ್.ಎನ್‍ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ